ಟಂಡನ್, ಪುರುಷೋತ್ತಮದಾಸ್
1882-1961. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವಹಿಸಿದ ಗಣ್ಯನಾಯಕರಲ್ಲಿ ಒಬ್ಬರು ; ಉದ್ದಾಮ ಪಂಡಿತರು, ಭಾರತೀಯ ಸಂಸ್ಕøತಿಯ ಪುನರುತ್ಥಾನದಲ್ಲಿ ಅತ್ಯಂತ ಶ್ರದ್ಧೆಯುಳ್ಳವರಾಗಿದ್ದ ಮೇಧಾವಿಗಳು.

ಪುರಿಷೋತ್ತಮದಾಸ್ ಟಂಡನ್ 1882ರಲ್ಲಿ ಹುಟ್ಟಿದರು. ಇವರ ಜನ್ಮಸ್ಥಳ ಅಲಹಾಬಾದ್. ಪ್ರಾಥಮಿಕದಿಂದ ಎಂ.ಎ., ಎಲ್.ಎಲ್.ಬಿ. ವರೆಗೆ ಅಲ್ಲೇ ಶಿಕ್ಷಣ ಪಡೆದರು. ವಿದ್ಯಾಭ್ಯಾಸ ಮುಗಿಸಿದ ಮೇಲೆ ಅಲಹಾಬಾದಿನಲ್ಲಿ ವಕೀಲಿ ಆರಂಭಿಸಿದ ಟಂಡನರು ಬಹುಬೇಗ ಖ್ಯಾತಿ ಗಳಿಸಿದರು. ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ತೀವ್ರವಾಗುತ್ತಿದ್ದಾಗ ತಾವು ವೃತ್ತಿಯಿಂದ ಹಣ ಗಳಿಸಿ ಸುಖಜೀವನ ನಡೆಸುವ ಆಸೆ ಅನುಚಿತವೆನಿಸಿತು. ಆದ್ದರಿಂದ ಅವರು ವಕೀಲಿಯನ್ನು ತ್ಯಜಿಸಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸ್ವಯಂಸೇವಕರನ್ನು ಸಜ್ಜುಗೊಳಿಸುವುದಕ್ಕಾಗಿ ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಸಂಘದ ಸದಸ್ಯರಾಗಿ ಸೇರಿದರು. ಸಾರ್ವಜನಿಕ ಸೇವೆಗಾಗಿ ಪೂರ್ಣಕಾಲವನ್ನು ವಿನಿಯೋಗಿಸಲು ಆರಂಭಿಸಿದರು. ಇವರ ಸೇವೆಯನ್ನು ಮನ್ನಿಸಿ 1919ರಲ್ಲಿ ಇವರನ್ನು ಅಲಹಾಬಾದ್ ಪೌರಸಭೆಗೆ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು. 1921ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳವಳಿಯಲ್ಲಿ ಇವರು ಭಾಗವಹಿಸಿ ಬಂಧನಕ್ಕೊಳಗಾದರು. ಒಂದೂವರೆ ವರ್ಷ ಸೆರೆಮನೆಯ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಮೇಲೆ ಆರ್ಥಿಕ ಸಂಕಷ್ಟವನ್ನು ಅನುಭವಿಸಬೇಕಾಯಿತು. ಇದನ್ನು ಬಗೆಹರಿಸಿಕೊಳ್ಳಲು ಲಾಲಾ ಲಜಪತರಾಯರ ಸಲಹೆಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಹಾವ್ಯವಸ್ಥಾಪಕರ (ಜನರಲ್ ಮ್ಯಾನೇಜರ್) ಹುದ್ದೆಯನ್ನು ಒಪ್ಪಿಕೊಂಡರು. 1929ರ ಆಗಸ್ಟ್ ವರೆಗೆ ಆ ಹುದ್ದೆಯಲ್ಲಿದ್ದರು. ಲಾಲಾ ಲಜಪತರಾಯರು ನಿಧನಹೊಂದಿದಾಗ ಗಾಂಧೀಜಿಯ ಸಲಹೆಯಂತೆ ಟಂಡನರು ಲೋಕ ಸೇವಕ ಸಂಘದ ಅಧ್ಯಕ್ಷ ಪದವಿ ವಹಿಸಿಕೊಂಡರು. ಆಗಿನಿಂದ ತಮ್ಮ ಮರಣದ ಪರ್ಯಂತ ಆ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

1930-31ರಲ್ಲಿ ಸಂಯುಕ್ತಪ್ರಾಂತ್ಯಗಳಲ್ಲಿ (ಈಗಿನ ಉತ್ತರ ಪ್ರದೇಶ) ರೈತರ ಸಂಘಟನೆಯ ಕಾರ್ಯದಲ್ಲಿ ತೊಡಗಿದರು. ಜಮೀನ್ದಾರಿ ಪದ್ಧತಿ ರದ್ದಾದ ಹೊರತು ಬಡರೈತರ ಉದ್ಧಾರವಾಗುವುದಿಲ್ಲವೆಂಬುದು ಅವರ ತೀವ್ರ ನಂಬಿಕೆಯಾಗಿತ್ತು. ಬಡರೈತರ ಮೇಲೆ ಹೇರಲಾಗಿದ್ದ ಕಂದಾಯದ ಹೊರೆಯನ್ನು ತಪ್ಪಿಸಲು ಚಳವಳಿ ಮಾಡಿದರು. ಇದರಿಂದ ಅವರ ದಸ್ತಗಿರಿಯಾಯಿತು. ಅನಂತರ ಇವರು 1932ರ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಬಿಡುಗಡೆಯಾದ ಅನಂತರ ಅಸ್ಪøಶ್ಯತಾನಿವಾರಣೆ ಹಾಗೂ ಹರಿಜನೋದ್ಧಾರಕ್ಕಾಗಿ ಶ್ರಮಿಸಿದರು.

1937ರಲ್ಲಿ ಪ್ರಾಂತ್ಯಗಳಲ್ಲಿ ಪ್ರಜಾಸರ್ಕಾರ ಏರ್ಪಟ್ಟಾಗ ಟಂಡನರು ಸಂಯುಕ್ತ ಪ್ರಾಂತ್ಯಗಳ ವಿಧಾನಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. 1939ರಲ್ಲಿ ಬ್ರಿಟಿಷ್ ಸರ್ಕಾರದ ಯುದ್ಧನೀತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ಕೊಟ್ಟಾಗ ಪುರುಷೋತ್ತಮ ದಾಸ್ ಟಂಡನರು ವಿಧಾನಸಭೆಯ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. 1940ರಲ್ಲಿ ನಡೆದ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. 1942ರಲ್ಲಿ ಮತ್ತೆ ಇವರು ದಸ್ತಗಿರಿಯಾಗಿ 1949ರಲ್ಲಿ ಬಿಡುಗಡೆ ಹೊಂದಿದರು. 1946ರಲ್ಲಿ ಮತ್ತೆ ಸಂಯುಕ್ತ ಪ್ರಾಂತ್ಯಗಳ ವಿಧಾನಸಭೆಯ ಅಧ್ಯಕ್ಷರಾಗಿಯೂ 1948ರಲ್ಲಿ ಅಲ್ಲಿಯ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾಗಿಯೂ ಆರಿಸಲ್ಪಟ್ಟರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಇವರು ಚುನಾಯಿತರಾದ್ದು 1950ರಲ್ಲಿ. ಆದರೆ ಸಂಪ್ರದಾಯಶರಣರಾದ ಟಂಡನರಿಗೂ ಪ್ರಗತಿಪರ ಮನೋಭಾವದ ಪ್ರಧಾನಿ ಜವಹರಲಾಲ್ ನೆಹರೂರವರಿಗೂ ತೀವ್ರ ಭಿನ್ನಾಭಿಪ್ರಾಯ ಉಂಟಾಯಿತು. ಕಡೆಗೆ ಟಂಡನರು ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. 1952ರಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ಲೋಕಸಭೇಗೂ 1957ರಲ್ಲಿ ರಾಜ್ಯಸಭೆಗೂ ಆಯ್ಕೆಯಾದರು. ಆದರೆ ಸ್ವಲ್ಪ ಕಾಲದ ಅನಂತರ ಅಸ್ವಸ್ಥತೆಯಿಂದಾಗಿ ಇವರು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಅಲಹಾಬಾದಿಗೆ ಹಿಂದಿರುಗಿದರು.

ಲೋಕಮಾನ್ಯ ಟಿಳಕರ ಆದರ್ಶ, ಮಹಾತ್ಮ ಗಾಂಧಿಯವರ ಮಾರ್ಗದರ್ಶನ ಮತ್ತು ಮದನ ಮೋಹನ ಮಾಳವೀಯರ ವಿಚಾರಗಳಿಂದ ಪ್ರಭಾವಿತರಾಗಿದ್ದ ಪುರುಷೋತ್ತಮದಾಸ್ ಟಂಡನರ ಜೀವನ ತ್ಯಾಗಮಯವಾದ್ದು, ಸೇವಾನಿಷ್ಠವಾದ್ದು, ಲೋಕಸೇವಕ ಸಂಘದ ಅಧ್ಯಕ್ಷರಾಗಿ, ಕಾಂಗ್ರೆಸ್ಸಿನ ನಾಯಕರಾಗಿ ಇವರು ಅನೇಕ ಮಂದಿ ಪೂರ್ಣಕಾಲದ ಶಿಸ್ತಿನ ದೇಶಸೇವಕರನ್ನು ತರಬೇತು ಮಾಡಿದ್ದರು. ಭಾರತದ ರಾಜನೈತಿಕ ಹಾಗೂ ಸಾಂಸ್ಕøತಿಕ ಏಕತೆಯನ್ನು ಸಾಧಿಸಲು ಏಕಭಾಷೆ ಮತ್ತು ಏಕಲಿಪಿಯನ್ನು ಅಂಗೀಕರಿಸುವುದು ಅಗತ್ಯವೆಂದೂ ಹಿಂದಿ ಏಕೈಕ ರಾಷ್ಟ್ರಭಾಷೆಯಾಗಬೇಕೆಂದೂ ದೇವನಾಗರಿ ಲಿಪಿ ರಾಷ್ಟ್ರಲಿಪಿಯಾಗಬೇಕೆಂದೂ ಉಗ್ರ ಚಳವಳಿ ನಡೆಸಿದರು. ಈ ಉದ್ದೇಶ ಸಾಧನೆಗಾಗಿ ಹಿಂದು ಸಾಹಿತ್ಯ ಸಮ್ಮೇಳನವನ್ನು ಸ್ಥಾಪಿಸಿದರು. ಏಕಭಾಷೆ, ಏಕಲಿಪಿ ಬಗ್ಗೆ ತುಂಬ ನಿಷ್ಠೆ ಹೊಂದಿದ್ದ ಅವರು ಗಾಂಧೀಜಿಯವರೊಂದಿಗೂ ಮತಭೇದ ತಳೆದಿದ್ದರು. ಹಿಂದಿ ಭಾಷೆಯ ಬಗ್ಗೆ ಇವರು ತೋರಿದ ಅತಿಯಾದ ವ್ಯಾಮೋಹ ಹಿಂದೀತರ ರಾಜ್ಯಗಳ ನಾಯಕರಿಗೆ ಅತಿರೇಕವಾಗಿ ಭಾಸವಾಯಿತು. ಈ ಕಾರಣದಿಂದಾಗಿ ಇವರು ವಿವಾದಾಸ್ಪದ ವ್ಯಕ್ತಿಯೆನಿಸಿದ್ದರು.

ಭಾರತೀಯ ಸಂಸ್ಕøತಿಯ ಮತ್ತು ಅದರ ಭವ್ಯಪರಂಪರೆಯ ಪುನರುತ್ಥಾನ ಇವರ ಜೀವನದ ಧ್ಯೇಯವಾಗಿತ್ತು. ಸತ್ಯ, ಅಹಿಂಸೆ, ಸೇವಾನಿಷ್ಠೆ, ತ್ಯಾಗ ಹಾಗೂ ಉನ್ನತ ರಾಜನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಇವರನ್ನು ಮಹಾತ್ಮಗಾಂಧಿಯವರು ರಾಜರ್ಷಿ ಇಂದು ಕರೆದಿದ್ದರು. ಇವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿತು. ರಾಷ್ಟ್ರಪತಿ ರಾಜೇಂದ್ರ ಪ್ರಸಾದರೇ ಅಲಹಾಬಾದಿಗೆ ಹೋಗಿ ಇವರಿಗೆ ಆ ಪ್ರಶಸ್ತಿ ನೀಡಿದರು. ಪುರುಷೋತ್ತಮದಾಸ್ ಟಂಡನರು 1961ರ ಜುಲೈ 1ರಂದು ನಿಧನರಾದರು.											(ವಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ